ಲೋಹಗಳನ್ನು ಅವುಗಳ ಅದುರುಗಳಿಂದ ಬೇರ್ಪಡಿಸಿ ಮಾನವನ ಉಪಯೋಗಕ್ಕೆ ಬೇಕಾದಂತೆ ಸಂಸ್ಕರಿಸಿ ಮಾರ್ಪಡಿಸುವ ಕಲೆಗಾರಿಕೆ ಮತ್ತು ತಂತ್ರವಿದ್ಯೆ (ಮೆಟಲರ್ಜಿ). ವಾಸ್ತವವಾಗಿ ಪ್ರಯೋಗಶಾಲೆಯ ಆಸಕ್ತಿಗಿಂತ ವಾಣಿಜ್ಯೋದ್ದೇಶವೇ ಲೋಹವಿಜ್ಞಾನದ ವಿಕಾಸಕ್ಕೆ ಪ್ರಮುಖ ಕಾರಣ. ಇದು ಲೋಹಗಳ ರಾಸಾಯನಿಕ, ಭೌತಿಕ ಹಾಗೂ ಪರಮಾಣವಿಕ ಗುಣಲಕ್ಷಣಗಳು ಮತ್ತು ಲೋಹಗಳ ಸಂಯೋಗದಿಂದ ಮಿಶ್ರಲೋಹಗಳನ್ನು ತಯಾರಿಸುವ ವಿಧಾನವನ್ನೂ ಒಳಗೊಂಡಿದೆ. ಇದಲ್ಲದೆ ದ್ಯತಿ ಹಾಗೂ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು, ಎಕ್ಸ್-ಕಿರಣ ವಿವರ್ತನೆ ಇತ್ಯಾದಿಗಳನ್ನು ಬಳಸಿಕೊಂಡು ಲೋಹಗಳ ಹಾಗೂ ಮಿಶ್ರಲೋಹಗಳ ಸಂಯೋಜನೆ ಹಾಗೂ ಸ್ಫಟಿಕೀಯ ರಚನೆಯನ್ನು ಅಧ್ಯಯನ ಮಾಡುವ ಲೋಹರಚನಾ ವಿಜ್ಞಾನವೂ ಇದರ ಪ್ರಮುಖ ಅಂಗವಾಗಿದೆ. 

	ಇತಿಹಾಸ: ಮಾನವನಿಗೆ ಲೋಹಗಳ ಬಗೆಗಿನ ಜ್ಞಾನ ಕ್ರಿ.ಪೂ.ಸು. 4000ದಷ್ಟು ಹಿಂದಿನಿಂದಲೂ ಇತ್ತೆಂದು ತಿಳಿದುಬಂದಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಅಂದಿನ ಕೆಲವು ತಾಮ್ರದ ಗಣಿಗಳನ್ನು ಗುರುತಿಸಿದ್ದಾರೆ. ಅಂದು ಅದುರಿನಿಂದ ತಾಮ್ರವನ್ನು ಪ್ರತ್ಯೇಕಿಸಿ ಈ ಲೋಹವನ್ನು ಆಯುಧಗಳಿಗೆ ಹಾಗೂ ಇನ್ನಿತರ ಉಪಯೋಗೀ ವಸ್ತುಗಳ ತಯಾರಿಕೆಗೆ ಬಳಸುತ್ತಿದ್ದರೆಂದು ನಂಬಲಾಗಿದೆ. 

	ಕ್ರಿ.ಪೂ. 4000-1400ರ ಅವಧಿಯಲ್ಲಿ ಕಂಚಿನ ಉಪಜ್ಞೆ ಆಯಿತು. ಹೊಸತಾಗಿ ದೊರೆತ ಇನ್ನೊಂದು ಲೋಹ ತವರವನ್ನು ತಾಮ್ರದೊಡನೆ ಬೆರೆಸಿದಾಗ ಉಂಟಾಗುವ ಈ ಮಿಶ್ರಲೋಹ ತಾಮ್ರಕ್ಕಿಂತ ಹೆಚ್ಚು ಭಿದುರ ಎಂಬ ಅಂಶ ಬೆಳಕಿಗೆ ಬಂತು. ಕಂಚಿನ ಹೊಳಪು ಮತ್ತು ನಾದಗಳ ಕಾರಣವಾಗಿ ಅದರ ಉಪಯೋಗ ಹೆಚ್ಚಾಯಿತು. ಕ್ರಿ.ಪೂ.ಸು. 3000ದ ಆಸುಪಾಸಿನಲ್ಲಿ ಕಬ್ಬಿಣದ ಬಳಕೆಯೂ ಪ್ರಾರಂಭವಾಗಿ ಸುಮಾರಿಗೆ ನೈಋತ್ಯ ಯುರೋಪ್ ಹಾಗೂ ಏಷ್ಯ ದೇಶಗಳಲ್ಲಿ ಬಳಕೆಗೆ ಬಂದಿತು. ಕ್ರಿ.ಪೂ. 1600-600ರ ಅವಧಿಯಲ್ಲಿ ತಾಮ್ರ ಮತ್ತು ಸತುವನ್ನು ಬೆರೆಸಿ ಹಿತ್ತಾಳೆ ಎಂಬ ಒಂದು ಮಿಶ್ರಲೋಹವನ್ನು ರಚಿಸಿದರು. ಇದರ ಆಕರ್ಷಕ ಹೊಳಪಿನಿಂದ ಇದು ಬೇಗನೆ ಜನಪ್ರಿಯವಾಯಿತು. ರೋಮನ್ ಸಾಮ್ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಈ ಲೋಹವನ್ನು ರೋಮನ್ನರು ಯುದ್ಧಕವಚಗಳು, ನಾಣ್ಯಗಳು, ಹಾಗೂ ಆಭರಣಗಳಿಗಾಗಿ ಉಪಯೋಗಿಸಿದರು. ಕ್ರಿ.ಪೂ. 500ರ ಸುಮಾರಿಗೆ ಬೆಳ್ಳಿಯ ಗಣಿಗಾರಿಕೆ ಆರಂಭವಾಗಿ ಬೆಳ್ಳಿಯ ಅದುರಿನೊಡನೆ ಸೇರಿಕೊಂಡಿದ್ದ ಸೀಸವನ್ನು ಮುಂದಿನ ವರ್ಷಗಳಲ್ಲಿ ಬೇರ್ಪಡಿಸಿ ಬೆಳ್ಳಿಯನ್ನು ಪಡೆಯಲಾಯಿತು. ಲೋಹವನ್ನು ಮಾನವ ಬಳಸಲು ತೊಡಗಿದ ಆದಿಕಾಲದಲ್ಲಿಯೇ ಚಿನ್ನ ದೊರಕಿತ್ತಾದರೂ ಅದು ಮೆದು ಲೋಹವಾದ್ದರಿಂದ ಅದಕ್ಕೆ ಯುದ್ಧ ಹಾಗೂ ಕೃಷಿಸಂಬಂಧೀ ಉಪಯೋಗವಿರಲಿಲ್ಲ. ಹೀಗಾಗಿ ಅದು ಕೇವಲ ಆಲಂಕಾರಿಕ ಲೋಹವಾಗಿ ಉಳಿಯಿತು. ಆದರೆ ಬೆಳ್ಳಿಯನ್ನು ಸಂಸ್ಕರಿಸಲು  ಕಲಿತಮೇಲೆ ಚಿನ್ನ ಹಾಗೂ ಬೆಳ್ಳಿಗಳ ಸಂಯೋಜನೆಯಿಂದ ಎಲೆಕ್ಟ್ರಮ್ ಎಂಬ ಇನ್ನೊಂದು ಮಿಶ್ರಲೋಹವನ್ನು ತಯಾರಿಸತೊಡಗಿದ. 

ಪ್ರಪಂಚದ ಹಲವೆಡೆ ನಾಗರಿಕತೆಗಳು ವಿಕಾಸವಾಗುತ್ತಿದ್ದಂತೆ ನಡೆಯುತ್ತಿದ್ದ ಲೋಹಗಳ ಹುಡುಕಾಟದಲ್ಲಿ ಭಾರತವೂ ಹಿಂದೆ ಬೀಳಲಿಲ್ಲ. ಕ್ರಿ.ಪೂ. 500-ಕ್ರಿ.ಶ. 500ರ ಅವಧಿಯಲ್ಲಿ ಪ್ರಪಂಚದಲ್ಲೇ ಮೊದಲಬಾರಿಗೆ ಭಾರತದಲ್ಲಿ ಉಕ್ಕು ಉತ್ಪಾದಿಸಲ್ಪಟ್ಟಿತು. 
16ನೆಯ ಶತಮಾನದಲ್ಲಿ ಯುರೋಪಿನ ಇಬ್ಬರು ವಿಜ್ಞಾನಿಗಳು ಅಲ್ಲಿಯ ತನಕ ಗಳಿಸಿದ್ದ ಲೋಹವಿಜ್ಞಾನದ ವಿವರಗಳನ್ನು ಕ್ರೋಡೀಕರಿಸಿ ಎರಡು ಮಹತ್ತ್ವದ ಪುಸ್ತಕಗಳನ್ನು ಪ್ರಕಟಿಸಿದರು. ಇಟೆಲಿಯ ವಾನ್ನೋಸಿಯೋ ಬಿರಿಂಗುಸಿಯೋ (1480-1537) ಎಂಬಾತನ ‘ಡಿ ಲಾ ಪೈರೋಟೆಕ್ನಿಯಾ’ (ಪ್ರಕಟಣೆ 1540) ಎಂಬ ಪುಸ್ತಕ ಹಾಗೂ ಜರ್ಮನಿಯ ಜಾರ್ಜಿಯಸ್ ಅಗ್ರಿಕೊಲೂ (1492-1566) ಎಂಬಾತನ ‘ಡಿ ರಿ ಮೆಟಾಲಿಕಾ’ ಎಂಬ ಇನ್ನೊಂದು ಪುಸ್ತಕ ಲೋಹವಿಜ್ಞಾನದ ಮೊದಲ ಗ್ರಂಥಗಳಾಗಿ ದಾಖಲಾದುವು. 

	ನಾಗರಿಕತೆಯ ಪ್ರಗತಿಯಲ್ಲಿ ಲೋಹೋತ್ಪಾದನೆಗೆ 6000 ವರ್ಷಗಳ ಇತಿಹಾಸವಿದ್ದರೂ 19ನೆಯ ಶತಮಾನದ ತನಕವೂ ಲೋಹಗಾರಿಕೆಯನ್ನು ಒಂದು ಕರಕುಶಲ ವೃತ್ತಿಯೆಂದೇ ಪರಿಗಣಿಸಲಾಗಿತ್ತು. ಆದರೆ ಕಳೆದ ಎರಡು ಶತಮಾನಗಳ ಅವಧಿಯಲ್ಲಿ ನಡೆದ ಹಲವಾರು ಸಂಶೋಧನೆಗಳ ಫಲವಾಗಿ ಇಂದು ಲೋಹವಿಜ್ಞಾನ ಒಂದು ಪ್ರತ್ಯೇಕ ಶಾಖೆಯಾಗಿಯೂ ಪದಾರ್ಥವಿಜ್ಞಾನದ ಭಾಗವಾಗಿಯೂ ಬೆಳೆದಿದೆ.

	ಲೋಹದ ಅದುರುಗಳಿಂದ ಲೋಹಗಳನ್ನು ಪೃಥಕ್ಕರಿಸಿ ಶುದ್ಧ ಲೋಹಗಳನ್ನು ಪಡೆಯುವ ಆಹರಣಲೋಹವಿಜ್ಞಾನದಲ್ಲಿ (ಎಕ್‍ಸ್ಟ್ರ್ಯಾಕ್ಷನ್ ಮೆಟಲರ್ಜಿ) ರಾಸಾಯನಿಕ ಉಷ್ಣಗತಿವಿಜ್ಞಾನ, ಬಲಗತಿವಿಜ್ಞಾನ ಮತ್ತು ರಾಸಾಯನಿಕ ಎಂಜಿನಿಯರಿಂಗ್‍ಗಳ ಸಮರ್ಥ ಬಳಕೆಯಿಂದ ಲೋಹಗಳ ಬಗೆಗಿನ ಜ್ಞಾನವೃದ್ಧಿಯಾಗಿ ಹೊಸಹೊಸ ಲೋಹಗಳ ಆವಿಷ್ಕಾರವೂ ಸಾಧ್ಯವಾಗಿದೆ. ಭೌತಿಕ ಲೋಹವಿಜ್ಞಾನದಲ್ಲಿ ಲೋಹಗಳ ಸಮಗ್ರ ಸೂಕ್ಷ್ಮರಚನೆ ಹಾಗೂ ಪರಮಾಣವಿಕ ರಚನೆಗಳ ನಡುವಿನ ಸಂಬಂಧಗಳ ಅಧ್ಯಯನದಿಂದ ಲೋಹಗಳಲ್ಲದೆ ಸಿರಾಮಿಕ್ಸ್, ಪಾಲಿಮರ್ಸ್ ಹಾಗೂ ಇನ್ನಿತರ ಸಂಯುಕ್ತ ಪದಾರ್ಥಗಳ ವರೆಗೂ ಈ ವಿಜ್ಞಾನಶಾಖೆ ಅಗಾಧವಾಗಿ ಬೆಳೆದಿದೆ. 

20ನೆಯ ಶತಮಾನ ಬಂದಾಗ ಹಲವಾರು ಕ್ಷೇತ್ರಗಳಲ್ಲಿ ಅಲ್ಯುಮಿನಿಯಮಿನ ಬಳಕೆಯಲ್ಲಿ ನಡೆದ ಹಲವಾರು ಸಂಶೋಧನೆಗಳು ಲೋಹರಚನಾವಿಜ್ಞಾನದಲ್ಲಿ ಕ್ರಾಂತಿ ಉಂಟುಮಾಡಿದುವು. 1906ರಲ್ಲಿ ಬರ್ಲಿನ್ ನಗರದಲ್ಲಿ ಆಲ್‍ಫ್ರೆಡ್ ವಿಲ್ಮ್ಸ್ ಎಂಬಾತ ಅಲ್ಯುಮಿನಿಯಮ್ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಮೆಗ್ನೇಸಿಯಮ್ ಅಥವಾ ತಾಮ್ರ ಸೇರಿಸಿ ತೂಕದಲ್ಲಿ ಗಮನಾರ್ಹ ಹೆಚ್ಚಳವಿಲ್ಲದೆ ‘ಡ್ಯುರಾಲ್ಯುಮಿನ್’ ಎಂಬ ಒಂದು ಶಕ್ತಿಯುತ ಮಿಶ್ರಲೋಹ ತಯಾರಿಸಿದ. ಈ ಸಂಶೋಧನೆ ಮುಂದೆ ಹಲವಾರು ಉತ್ತಮ ಗುಣಮಟ್ಟದ ಶಕ್ತಿಯುತ ಮಿಶ್ರಲೋಹಗಳ ತಯಾರಿಕೆಗೆ ನಾಂದಿಯಾಯಿತು. 

ಖನಿಜಗಳ ವರ್ಗೀಕರಣ: ಭೂಮಿಯಲ್ಲಿ ದೊರೆಯುವ ಖನಿಜಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದು. 

1. ಶುದ್ಧರೂಪದಲ್ಲಿ ದೊರೆಯುವ ಖನಿಜಗಳು: ಚಿನ್ನ ಮತ್ತು ಪ್ಲಾಟಿನಮ್ ಎಂಬ ಎರಡು ಲೋಹಗಳು ಮಾತ್ರ ಅವುಗಳ ಶುದ್ಧರೂಪದಲ್ಲಿ ದೊರೆಯುತ್ತವೆ. ಬೆಳ್ಳಿ, ತಾಮ್ರ, ಕಬ್ಬಿಣ, ಓಸ್ಮಿಯಮ್ ಮತ್ತು ಇನ್ನೂ ಕೆಲವು ಲೋಹಗಳು ಕೆಲವೊಮ್ಮೆ ಶುದ್ಧರೂಪದಲ್ಲಿ ದೊರೆತ ಉದಾಹರಣೆಗಳಿವೆ. 

2. ಸಲ್ಫೈಡ್ ಖನಿಜಗಳು: ಭೂಮಿಯಲ್ಲಿ ದೊರೆಯುವ ಅತ್ಯಂತ ಹೆಚ್ಚು ಖನಿಜಗಳು ಸಲ್ಫೈಡ್ ಗುಂಪಿಗೆ ಸೇರಿವೆ. ಟೆಲ್ಯೂರಾೈಡ್, ಸಲೆನಾೈಡ್ ಮತ್ತು ಆರ್ಸಿನಾೈಡ್ ಖನಿಜಗಳು ಕೂಡ ಸಲ್ಫೈಡ್ ಖನಿಜಗಳಂತೆಯೇ ಇರುವುದರಿಂದ ಹಾಗೂ ಇವು ಹೆಚ್ಚಾಗಿ ಸಲ್ಫೈಡ್ ಖನಿಜಗಳ ಜೊತೆಯೇ ದೊರೆಯುವುದರಿಂದ ಇವೆಲ್ಲವನ್ನೂ ಸಲ್ಫೈಡ್ ಗುಂಪಿಗೆ ಸೇರಿಸಬಹುದು. ತಾಮ್ರ, ಸೀಸ, ಸತು, ನಿಕ್ಕಲ್, ಮಾಲಿಬ್ಡಿನಮ್, ಬೆಳ್ಳಿ, ಆರ್ಸೆನಿಕ್, ಆಂಟಿಮನಿ, ಬಿಸ್ಮತ್, ಕೋಬಾಲ್ಟ್ ಮತ್ತು ಪಾದರಸ-ಇವೆಲ್ಲವೂ ಸಲ್ಫೈಡ್ ಗುಂಪಿನ ಖನಿಜಗಳೇ. ಕೆಲವೊಮ್ಮೆ ಚಿನ್ನ ಮತ್ತು ಬೆಳ್ಳಿ ಟೆಲ್ಯೂರಾೈಡ್‍ನ ಜೊತೆಗೂ ಪ್ಲಾಟಿನಮ್ ಲೋಹ ಆರ್ಸೆನಿಕ್ ಜೊತೆಗೂ ದೊರೆಯುವುದುಂಟು. ಕ್ಯಾಡ್ಮಿಯಮ್ ಮತ್ತು ಇಂಡಿಯಮ್ ಎಂಬ ಎರಡು ವಿರಳ ಲೋಹಗಳೂ ಈ ಗುಂಪಿಗೇ ಸೇರಿವೆ. 

3. ಆಕ್ಸೈಡ್‍ಗಳು ಮತ್ತು ಹೈಡ್ರಾಕೈಡ್‍ಗಳು: ಈ ಗುಂಪಿನ  ಖನಿಜಗಳು ದೊಡ್ಡ ಪ್ರಮಾಣದಲ್ಲಿ ವೈವಿಧ್ಯಮಯ ಗುಂಪುಗಳಲ್ಲಿ ದೊರೆಯುತ್ತವೆ. ಅಲ್ಯೂಮಿನಿಯಮ್, ಕಬ್ಬಿಣ, ಮ್ಯಾಂಗನೀಸ್, ಮತ್ತು ಟೈಟಾನಿಯಮ್ ಗಳು ಆಕ್ಸೈಡ್‍ಗಳೋ ಹೈಡ್ರಾಕ್ಸೈಡ್‍ಗಳೋ ಆಗಿರುತ್ತವೆ. ಕ್ರೋಮಿಯಮ್, ತವರ, ಟಂಗ್‍ಸ್ಟನ್, ಟಾಂಟಲಮ್, ನಿಯೋಬಿಯಮ್, ಮತ್ತು ಯುರೇನಿಯಮ್‍ನಂಥ ವಿರಳ ಲೋಹಗಳು ಆಕ್ಸೈಡ್‍ಗಳಾಗಿವೆ. ಮ್ಯಾಗ್ನಟೈಟ್‍ನಲ್ಲಿ (ಕಬ್ಬಿಣದ ಒಂದು ಆಕ್ಸೈಡ್ ಅದುರು) ಪರಮಾಣವಿಕ ಬದಲಿಕೆಯಿಂದ ವೆನೇಡಿಯಮ್ ಎಂಬ ಲೋಹವನ್ನೂ ಶೋಧಿಸಿದ್ದಾರೆ. 

4. ಕಾರ್ಬೋನೇಟ್‍ಗಳು ಮತ್ತು ಸಿಲಿಕೇಟ್‍ಗಳು: ಕಾರ್ಬೋನೇಟ್ ಖನಿಜಗಳು ಭೂಮಿಯ ಮೇಲ್ಮೈಯಲ್ಲಿ ಎಲ್ಲೆಡೆಯೂ ಹರಡಿವೆಯಾದರೂ ಅವುಗಳಲ್ಲಿ ಕೆಲವು ಮಾತ್ರ ಅದುರಿನ ರೂಪದಲ್ಲಿ ಲಭ್ಯ. ಇವು ಕಬ್ಬಿಣ, ಮ್ಯಾಂಗನೀಸ್ ಮತ್ತು ಮೆಗ್ನೆಸಿಯಮ್‍ಗಳ ಕಾರ್ಬೊನೇಟ್ ರೂಪದಲ್ಲಿರುತ್ತವೆ. ಸಿಲಿಕೇಟ್ ಖನಿಜಗಳಿಂದ ಲಭಿಸುವ ಲೋಹಗಳು ಬಲು ಕಡಿಮೆ. ಬೆರೀಲಿಯಮ್ ಮತ್ತು ಲೀಥಿಯಮ್ ಖನಿಜಗಳು ಇವುಗಳಲ್ಲಿ ಮುಖ್ಯವಾದವು. 

ಇಂದಿನ ಲೋಹವಿಜ್ಞಾನ: ಗಣಿಗಳಿಂದ ಕಚ್ಚಾ ಅದುರನ್ನು ಪಡೆದ ಮೇಲೆ ಅದರಲ್ಲಿ ಸೇರಿರುವ ಕಲ್ಲು ಮಣ್ಣು ಹಾಗೂ ಇನ್ನಿತರ ಅನಪೇಕ್ಷಿತ ಪದಾರ್ಥಗಳನ್ನು ಬೇರ್ಪಡಿಸುವ ವಿಧಾನಕ್ಕೆ ಆಹರಣಲೋಹವಿಜ್ಞಾನ ವೆಂದು ಹೆಸರು. ಈ ಹಂತದಲ್ಲಿ ಕಚ್ಚಾ ಅದುರನ್ನು ಪುಡಿಮಾಡಿ ಲೋಹವನ್ನು ಪಡೆಯಲು ಹಲವು ವಿಧಾನಗಳಿವೆ. (i) ಕೈಗಳಿಂದ ಬೇರ್ಪಡಿಸುವುದು (ಕಣ್ಣಿಂದಲೇ ಗುರುತಿಸುವುದು ಸಾಧ್ಯವಿದ್ದಾಗ); (ii) ಗುರುತ್ವ ಸಾರೀಕರಣ (ಗ್ರ್ಯಾವಿಟಿ ಕಾನ್ಸಂಟ್ರೇಶನ್); (iii) ತೇಲುವಿಕೆ ಯಿಂದ ವಿಂಗಡಣೆ; (iv) ಸ್ಥಾಯೀ ವೈದ್ಯುತಕ್ರಿಯೆ; (v) ಕಾಂತೀಯ ವಿಂಗಡಣೆ; (vi) ಇನ್ನಾವುದಾದರೂ ವಿಶಿಷ್ಟ ಪ್ರಕ್ರಿಯೆ. 

	ಆಹರಣ ಲೋಹವಿಜ್ಞಾನವನ್ನು ಭೌತಿಕಲೋಹವಿಜ್ಞಾನವೆಂದೂ ಕರೆಯುತ್ತಾರೆ. ಖನಿಜಗಳ ಸಜ್ಜುಗೊಳಿಸುವಿಕೆ ಎಂಬ ಇನ್ನೊಂದು ಹೆಸರೂ ಇದೆ. 
ಪ್ರಕ್ರಿಯಾ ಲೋಹವಿಜ್ಞಾನ: ಎರಡನೆಯ ಹಂತದಲ್ಲಿ ಲೋಹಗಳನ್ನು ಶುದ್ಧೀಕರಿಸಿ ವಿಶಿಷ್ಟ ಉಪಯೋಗಗಳಿಗಾಗಿ ಉತ್ಪಾದಿಸಲಾಗುತ್ತದೆ. ಈ ಉತ್ಪಾದನೆ ಹಲವಾರು ಪ್ರಕ್ರಿಯೆಗಳನ್ನೊಳಗೊಂಡಿದೆ. ಇವುಗಳಲ್ಲಿ (i) ಉಷ್ಣಲೋಹವಿಜ್ಞಾನ (ii) ವೈದ್ಯುತ ಲೋಹವಿಜ್ಞಾನ (iii) ಜಲಲೋಹವಿಜ್ಞಾನ ಪ್ರಮುಖವಾದವು. 

(i) ಉಷ್ಣಲೋಹವಿಜ್ಞಾನ (ಪೈರೊಮೆಟಲರ್ಜಿ): ಅದುರಿನಿಂದ ಲೋಹ ಪಡೆಯುವ ಹಾಗೂ ಅದನ್ನು ಶುದ್ಧೀಕರಿಸುವ (ಉಷ್ಣಲೋಹ ವಿಜ್ಞಾನದ) ಎರಡು ಪ್ರಮುಖ ವಿಧಾನಗಳಿಗೆ ಉತ್ಕರ್ಷಣ, ಅಪಕರ್ಷಣ ವೆಂದು ಹೆಸರು. ಉತ್ಕರ್ಷಣಕ್ರಿಯೆಯಲ್ಲಿ ಆಕ್ಸಿಜನ್‍ನೊಂದಿಗೆ ಸಂಯೋಗಿಸ ಬಲ್ಲ ಲೋಹಗಳು ಆಯಾ ಲೋಹದ ಆಕ್ಸೈಡ್‍ಗಳಾಗುತ್ತವೆ. ಇವನ್ನು ಮತ್ತೊಮ್ಮೆ ಸಂಸ್ಕರಿಸಿ ಶುದ್ಧ ಲೋಹವನ್ನು ಪಡೆಯಬಹುದು. ಈ ವಿಧಾನದಲ್ಲಿ ಲೋಹದ ಆಕ್ಸೈಡನ್ನು ಕಾರ್ಬನ್‍ನಂಥ ಅಪಕರ್ಷಕ ಕಾರಕಗಳೊಂದಿಗೆ ಕುಲುಮೆಯಲ್ಲಿಟ್ಟು ಕಾಸಿದಾಗ ಆ ಲೋಹ ಅದರಲ್ಲಿ  ಸಂಯೋಗಗೊಂಡಿರುವ ಆಕ್ಸಿಜನ್‍ನನ್ನು ಬಿಡುಗಡೆಗೊಳಿಸುತ್ತದೆ. ಈ ಆಕ್ಸಿಜನ್ ಕಾರ್ಬನ್‍ನೊಂದಿಗೆ ಮರು ಸಂಯೋಗಿಸಿ ಕಾರ್ಬೊನೇಷಿಯಸ್ ಆಕ್ಸೈಡ್ ಉಂಟಾಗಿ ಲೋಹದಿಂದ ಪ್ರತ್ಯೇಕವಾಗುತ್ತದೆ. ಉತ್ಕರ್ಷಣ ಮತ್ತು ಅಪಕರ್ಷಣ ಕ್ರಿಯೆಗಳಲ್ಲಿ ಉಂಟಾಗುವ ಪ್ರತಿಕ್ರಿಯೆಗಳು ಬಹಿರುಷ್ಣಕ (ಎಕ್ಸೊಥರ್ಮಿಕ್) ಅಂತರುಷ್ಣಕ ಅಥವಾ (ಎಂಡೊ ಥರ್ಮಿಕ್) ಆಗಿರುವುವು. 

(ii) ವೈದ್ಯುತ ಲೋಹವಿಜ್ಞಾನ: ಈ ವಿಧಾನದಲ್ಲಿ ಲೋಹವನ್ನು ಅತ್ಯಂತ ಶುದ್ಧರೂಪದಲ್ಲಿ ಪಡೆಯುವುದು ಸಾಧ್ಯ. ತಾಮ್ರ, ನಿಕ್ಕಲ್, ಸೀಸ, ಚಿನ್ನ, ಮತ್ತು ಬೆಳ್ಳಿಗಳನ್ನು ಶುದ್ಧೀಕರಿಸಲು ಇದು ಅತ್ಯಂತ ಯುಕ್ತ. ಶುದ್ಧೀಕರಿಸಬೇಕಾದ ಲೋಹವನ್ನು ಚಪ್ಪಡಿ ಆಕೃತಿಯಲ್ಲಿ ಎರಕವಿಟ್ಟುಕೊಂಡು ಇನ್ನೊಂದು ಲೋಹಫಲಕವನ್ನು ಕ್ಯಾಥೋಡ್ ಸ್ಥಾನದಲ್ಲಿಡಬೇಕು. ಇವೆರಡು ಎಲೆಕ್ಟ್ರೋಡ್‍ಗಳನ್ನು ಉತ್ತಮ ವಿದ್ಯುದ್ವಾಹಕವಾಗಿರುವ ವಿದ್ಯುದ್ವಿಭಜಕ ಗುಣವುಳ್ಳ ದ್ರಾವಣದಲ್ಲಿ ಮುಳುಗಿಸಿಡಬೇಕು. ಈ ಕೋಶದಲ್ಲಿ ನೇರವಾಗಿ ವಿದ್ಯುತ್ತನ್ನು ಪ್ರವಹಿಸಿದಾಗ ಆನೋಡಿನಲ್ಲಿರುವ ಲೋಹದ ಅಯಾನುಗಳು ವಿಮೋಚಿತವಾಗಿ ಕ್ಯಾಥೋಡಿನಲ್ಲಿರುವ ಲೋಹದ ಹಾಳೆಯ ಮೇಲೆ ಶೇಖರಗೊಳ್ಳುತ್ತವೆ. 

(iii) ಜಲಲೋಹವಿಜ್ಞಾನ: ಈ ವಿಧಾನದಲ್ಲಿ ಆಯ್ದ ಲೋಹಸಂಯು ಕ್ತಗಳನ್ನು ನಿಕ್ಷಾಲನಗೊಳಿಸಿ (ಲೀಚಿಂಗ್) ದ್ರಾವಣ ತಯಾರಿಸಿ ಇದರಲ್ಲಿ ಪ್ರಕ್ಷೇಪಿಸುವಂತೆ ಮಾಡಲಾಗುವುದು. ಅತ್ಯಂತ ಸರಳ ವಿಧಾನಗಳನ್ನು ಅನುಸರಿಸಬೇಕಾದಾಗ ಅಥವಾ ಲೋಹದ ಅದುರು ಅತ್ಯಂತ ಕೆಳಮಟ್ಟದಲ್ಲಿದ್ದು ಬೇರೆವಿಧಾನಗಳು ಅತ್ಯಂತ ದುಬಾರಿಯೆಂದು ಕಂಡುಬಂದಾಗ ಇಂಥ ನಿಕ್ಷಾಲನ ವಿಧಾನವನ್ನು ಅನುಸರಿಸುತ್ತಾರೆ.

ಎಲ್ಲ ಜಾತಿಯ ಅದುರುಗಳೂ ನಿಕ್ಷಾಲನಕ್ಕೆ ಯೋಗ್ಯವಾಗಿರುವುದಿಲ್ಲ. ಅಂಥ ವೇಳೆ ಅವನ್ನು ನಿಕ್ಷಾಲನಯೋಗ್ಯವಾಗುವಂತೆ ಪರಿವರ್ತಿಸ ಬೇಕಾಗುತ್ತದೆ. ನಿಕ್ಷಾಲನಕ್ರಿಯೆಗೆ ಎರಡು ಪದ್ಧತಿಗಳಿವೆ: (i) ಸಾಮಾನ್ಯ ನಿಕ್ಷಾಲನ: ಇದನ್ನು ಪರಿಸರದ ತಾಪ ಹಾಗೂ ವಾಯುಮಂಡಲದ ಒತ್ತಡದಲ್ಲಿ ಮಾಡಲಾಗುವುದು. (ii) ಸಂಮರ್ದ ನಿಕ್ಷಾಲನದಲ್ಲಿ  ನಿಕ್ಷಾಲನಕ್ರಿಯೆಯನ್ನು ಚುರುಕುಗೊಳಿಸುವುದಕ್ಕಾಗಿ ಕ್ರಮಕ್ರಮವಾಗಿ ಒತ್ತಡ ಮತ್ತು ತಾಪಗಳನ್ನು ಹೆಚ್ಚಿಸಲಾಗುವುದು.

ಲೋಹಗಳ ಉತ್ಪಾದನೆ: ಆರು ವಿಧಾನಗಳಿವೆ: (ii) ಯಾಂತ್ರಿಕ; (ii) ಎರಕ; (iii) ಮೇಲ್ಮೈ ಸಂಸ್ಕರಣ; (iv) ಚೂರ್ಣ ಲೋಹವಿಜ್ಞಾನ; (v) ಬೈಜಿಕ ಲೋಹವಿಜ್ಞಾನ ಹಾಗೂ (vi) ಉಷúಚಿಕಿತ್ಸೆ.

(i) ಯಾಂತ್ರಿಕ ವಿಧಾನದಲ್ಲೂ ಶೀತ ಪ್ರಕ್ರಿಯೆ ಮತ್ತು ಉಷ್ಣ ಪ್ರಕ್ರಿಯೆ ಎಂಬ ಎರಡು ಪದ್ಧತಿಗಳಿವೆ. ಶೀತ ಪ್ರಕ್ರಿಯೆಯಲ್ಲಿ ಲೋಹ ಗಟ್ಟಿಯಾಗಿ ಯಾವುದೇ ರಾಸಾಯನಿಕ ಬದಲಾವಣೆಯಾಗದೆ ರಚನೆಯಲ್ಲಿ ಮಾತ್ರ ಬದಲಾವಣೆಗೊಳ್ಳುತ್ತದೆ. ಉಷ್ಣ ಪ್ರಕ್ರಿಯೆಯಲ್ಲಿ ಲೋಹ ಕಾದು ಮೆತ್ತಗಾಗುತ್ತದೆ. ಲೋಹದ ಸ್ಫಟಿಕೀಯ ರಚನೆಯಲ್ಲಿ ಮಾರ್ಪಾಡುಂಟಾಗಿ ಅದನ್ನು ಯುಕ್ತವಾಗಿ ಸಂಸ್ಕರಿಸಬಹುದು. (ii) ಅನಂತರ ಈ ಲೋಹವನ್ನು ಉರುಳುಯಂತ್ರದ ಮೂಲಕ ಹಾಯಿಸಿ ಅಥವಾ ಸೆಳೆತಕ್ಕೆ ಒಳಪಡಿಸಿ ಬೇಕಾದ ಆಕಾರ ನೀಡಬಹುದು.

(ii) ಎರಕ ಹೊಯ್ಯುವ ವಿಧಾನದಲ್ಲಿ ಬೇಕಾದ ಆಕೃತಿಯ ಅಚ್ಚುಗಳನ್ನು ತಯಾರಿಸಿ ಕಾದ ಲೋಹರಸವನ್ನು ಅವುಗಳಲ್ಲಿ  ಹೊಯ್ದು ತಯಾರಿಸಲಾಗುತ್ತದೆ. 

(iii) ಮೇಲ್ಮೈ ಸಂಸ್ಕರಣವಿಧಾನದಲ್ಲಿ ಲೋಹರಕ್ಷಣೆಗೋಸ್ಕರ ಅದರ ಮೇಲ್ಮೈಗೆ ಲೋಹಲೇಪನದ ಇನ್ನೊಂದು ಪದರವನ್ನು ನೀಡಲಾಗುತ್ತದೆ. ಕುಲುಮೆಯಲ್ಲಿ ಕಾಸಿದ ಲೋಹರಸದಿಂದ, ವಿದ್ಯುಲ್ಲೇಪನಕ್ರಿಯೆಯಿಂದ ಅಥವಾ ಅಂಟಿಸುವ ವಿಧಾನದಿಂದ ಈ ಹೆಚ್ಚುವರಿ ಹೊರಪದರನ್ನು ನೀಡಬಹುದು. ಈ ಕ್ರಿಯೆಯಿಂದ ಲೋಹದ ಮೇಲ್ಮೈಯ ಗುಣಲಕ್ಷಣಗಳನ್ನೂ ಬದಲಾಯಿಸಬಹುದು. 

(iv) ಚೂರ್ಣಲೋಹವಿಜ್ಞಾನದಂತೆ ಲೋಹದ ಚೂರ್ಣವನ್ನು ಅಚ್ಚಿನಲ್ಲಿ ಹಾಕಿ ಅದನ್ನು ಸಂಮರ್ದಿಸಿ ಯುಕ್ತ ಶಾಖದಲ್ಲಿ ಘನಪದಾರ್ಥವಾಗಿ ಮಾರ್ಪಡಿಸಿದಾಗ ಅದು ಶಕ್ತಿಯುತವಾಗುತ್ತದೆ. 

(v) ಬೈಜಿಕ ಎಂಜಿನಿಯರಿಂಗಿನಲ್ಲಿ ಉಪಯುಕ್ತ ವಿಶಿಷ್ಟ ಲೋಹ ತಯಾರಿಕೆಗೆ ಬೈಜಿಕ ಲೋಹವಿಜ್ಞಾನ ವಿಧಾನವನ್ನು ಅನುಸರಿಸ ಲಾಗುತ್ತದೆ. ವಿದಳನಶೀಲ ಲೋಹಗಳನ್ನು ಪ್ರತ್ಯೇಕಿಸಲು ಈ ಪ್ರಕ್ರಿಯೆಯ ಅಗತ್ಯವಿದೆ. 

(vi) ಲೋಹಗಳಲ್ಲಿರುವ ಕೆಲವು ಗುಣಗಳನ್ನು ವೃದ್ಧಿಪಡಿಸಲು ಉಷ್ಣಚಿಕಿತ್ಸೆಯನ್ನು ನೀಡಲಾಗುತ್ತದೆ. ಉದಾ: ಗಡಸುತನ ಹೆಚ್ಚಿಸುವುದು, ಅಥವಾ ತಂತಿಯ ತನ್ಯತೆ ಹೆಚ್ಚಿಸುವುದು ಇತ್ಯಾದಿ.   
            
(ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ